ನಿಯಂತ್ರಣ ವ್ಯವಸ್ಥೆ -
	ಆಜ್ಞೆ ನೀಡಲು, ಆಜ್ಞೆಯನ್ನು ವಿಧಿನಿಯಮಗಳಿಗೆ ಒಳಪಡಿಸಲು ಅಥವಾ ತನ್ನನ್ನು ಯಾ ಪರವ್ಯವಸ್ಥೆಯನ್ನು ದಿಗ್ದರ್ಶಿಸಲು ಅನುವಾಗುವಂತೆ ಅಂತರಸಂಯೋಜಿತವಾಗಿರುವ ಹಲವಾರು ಬಿಡಿ ಘಟಕಗಳ ಅಥವಾ ಭೌತ ಸಲಕರಣೆಗಳ ಅಳವಡಿಕೆ ಯಾ ವ್ಯೂಹ (ಕಂಟ್ರೋಲ್ ಸಿಸ್ಟಮ್).

	ನಿಸರ್ಗಬಲಗಳನ್ನು ಯುಕ್ತವಾಗಿ ಉಪಯೋಗಿಸಿಕೊಂಡು ತನ್ನ ಅಳವಿಗೆ ಮೀರಿದ ಹಲವಾರು ಭೌತ ಕಾರ್ಯಗಳನ್ನು ನಿರ್ವಹಿಸಬಲ್ಲ ಮಾನವಸಾಮಥ್ರ್ಯ ನಾಗರಿಕತೆಯ ಪ್ರಮುಖ ಲಕ್ಷಣಗಳ ಪೈಕಿ ಒಂದು. ಈ ಬಲಗಳನ್ನು ಅನ್ವಯಿಸುವುದು, ವಿಮೋಚನೆಗೊಳಿಸುವುದು, ನಿಲ್ಲಿಸುವುದು ಹಾಗೂ ಅವುಗಳ ಕ್ರಿಯೆಯನ್ನು ಸಮುಚಿತವಾಗಿ ರೂಪಿಸುವುದು ಇವೇ ಮೊದಲಾದ ಕ್ರಿಯೆಗಳಿಗೆ ಒಟ್ಟಾಗಿ ನಿಯಂತ್ರಣ ಎಂಬ ಹೆಸರಿದೆ. ಆದ್ದರಿಂದ ಆಜ್ಞೆ ನೀಡಿಕೆ, ಅದರ ಹತೋಟಿ ಮತ್ತು ದಿಗ್ದರ್ಶನ ನಿಯಂತ್ರಣದ ಪರಿಧಿ ಒಳಗೆ ಸೇರುವುವು. ಇನ್ನು, ವ್ಯವಸ್ಥೆ ಎನ್ನುವುದು, ಬಿಡಿ ಬಿಡಿ ಆಗಿದ್ದು ಅಂತರಕ್ರಿಯೆಗಳಿಂದ ಕೂಡಿರುವ ಹಲವಾರು ಘಟಕಗಳ ವ್ಯೂಹ ಯಾ ಅಳವಡಿಕೆ. ಕಾರ್ಖಾನೆ, ಬೆರಳಚ್ಚುಯಂತ್ರ, ವಿದ್ಯುತ್ ಪಂಖ ಇವೆಲ್ಲವೂ ವ್ಯವಸ್ಥೆಗಳೇ. ಆದ್ದರಿಂದ ನಿಯಂತ್ರಣ ವ್ಯವಸ್ಥೆಗೆ ಈ ಮೇಲಿನಂತೆ ವ್ಯಾಖ್ಯೆ ಉಂಟು.

	ಯಂತ್ರ: ಯಾವುದೇ ರೂಪದ ಶಕ್ತಿಯನ್ನು ಇನ್ನೊಂದು ರೂಪದ ಶಕ್ತಿಯಾಗಿ ಮಾರ್ಪಡಿಸಬಲ್ಲ ಸಲಕರಣೆ. ಗಾಳಿಕೋಳಿಯಿಂದ ತೊಡಗಿ ಬೈಸಿಕಲ್ ಮೂಲಕ ಆಧುನಿಕ ಆಕಾಶನೌಕೆಗಳ ವರೆಗೆ ಎಲ್ಲ ಯಂತ್ರಗಳೂ ಮಾಡುವುದು ಇದನ್ನೇ. ಆದಿಮಯಂತ್ರಕ್ಕೆ ಉದಾಹರಣೆಯಾಗಿ ಕ್ರಿ.ಪೂ. 245ರಲ್ಲಿ ವಿಟ್ರೂವಿಯಸ್ ಎಂಬಾತ ಉಪಜ್ಞಿಸಿದ ಜಲಗಡಿಯಾರವನ್ನು ಇಲ್ಲವೇ ಆ ಮೊದಲೇ ಭಾರತದಲ್ಲಿ ಬಳಕೆಯಲ್ಲಿದ್ದ ನೀರಿನ ಏತವನ್ನು ಪರಿಶೀಲಿಸಬಹುದು. ಯಾವುದೇ ಯಂತ್ರವೂ ಒಂದು ವ್ಯವಸ್ಥೆ ಎನ್ನುವುದು ಮೇಲಿನ ವ್ಯಾಖ್ಯೆಯಿಂದ ಸ್ಪಷ್ಟವಾಗುವುದು. ಇದರಲ್ಲಿ ದತ್ತ ಉದ್ದೀಪನೆ (ಸ್ಟಿಮ್ಯುಲಸ್) ನಿರ್ದಿಷ್ಟ ಅನುಕ್ರಿಯೆ (ರೆಸ್ಪಾನ್ಸ್) ಅಥವಾ ಫಲಿತಾಂಶವನ್ನು ಉಂಟುಮಾಡುತ್ತದೆ. ಯಂತ್ರಕ್ಕೆ ಊಡುವ ಮಾಹಿತಿಯೇ ಉದ್ದೀಪನೆ. ಇದನ್ನು ನಿವೇಶ (ಇನ್‍ಪುಟ್) ಎನ್ನುವುದೂ ಉಂಟು. ಅನುಕ್ರಿಯೆಯನ್ನು ನಿರ್ಗಮ (ಔಟ್‍ಪುಟ್) ಎನ್ನುತ್ತಾರೆ.

	ತೆರೆದ ಕುಣಿಕೆ ವ್ಯವಸ್ಥೆ : ಒಂದು ನಿವೇಶನಕ್ಕೆ ಒಂದು ನಿರ್ಗಮ. ನಿರ್ಗಮ ಏನಾದರೂ ನಿವೇಶಕ್ಕೆ ಅದರ ಪರಿವೆ ಇಲ್ಲ-ಈ ತೆರನಾದ ವ್ಯವಸ್ಥೆಗೆ ತೆರೆದ ಕುಣಿಕೆ ವ್ಯವಸ್ಥೆ ಎಂದು ಹೆಸರು. ಜಲಗಡಿಯಾರ ಇಂಥ ಒಂದು ವ್ಯವಸ್ಥೆಗೆ ಉದಾಹರಣೆ. ತೆರೆದ ಕುಣಿಕೆ ವ್ಯವಸ್ಥೆಯಲ್ಲಿ ಪುನರ್ನಿವೇಶ (ಫೀಡ್‍ಬ್ಯಾಕ್) ಇರುವುದಿಲ್ಲ. ವ್ಯವಸ್ಥೆಯ ನಿರ್ಗಮಬಿಂದುವನ್ನು (ಅಂದರೆ ಅನುಕ್ರಿಯೆ ಸಂಭವಿಸುತ್ತಿರುವಲ್ಲಿ) ಜರಗುತ್ತಿರುವುದನ್ನು ನಿವೇಶ ಬಿಂದುವಿಗೆ (ಅಂದರೆ ಉದ್ದೀಪನೆಯನ್ನು ಊಡಲಾಗುತ್ತಿರುವಲ್ಲಿಗೆ) ವರ್ಗಾಯಿಸುವ ಕ್ರಿಯೆಗೆ ಪುನರ್ನಿವೇಶವೆಂದು ಹೆಸರು.

	ಮುಚ್ಚಿದ ಕುಣಿಕೆ ವ್ಯವಸ್ಥೆ: ಪುನರ್ನಿವೇಶ ಸಹಿತವಾದ ವ್ಯವಸ್ಥೆಗೆ ಈ ಹೆಸರಿದೆ. ಇದರಲ್ಲಿ ನಿರ್ಗಮವನ್ನು ನಿವೇಶದೊಡನೆ ಹೋಲಿಸಿ ಇವೆರಡರ ನಡುವಿನ ಯಾವುದೇ ವ್ಯತ್ಯಾಸ ಅಥವಾ ದೋಷವನ್ನು ಪರಿಶೀಲಿಸಿ ಆ ವ್ಯತ್ಯಾಸವನ್ನು ಕಡಿಮೆ ಮಾಡುವರು. ಪುನರ್ನಿವೇಶಸಹಿತ ಯಂತ್ರಗಳು ಕೂಡ ಹಿಂದಿನ ಕಾಲದಲ್ಲಿದ್ದವು; ಸ್ವಯಂಚಲಿ ಮರಕೊಯ್ತದ ಗಿರಣಿಗಳು (ಕ್ರಿ.ಶ. 400), ಚೀನದ ದಕ್ಷಿಣಮುಖಿರಥ (ಎಂಟನೆಯ ಶತಮಾನ), ಮಧ್ಯ ಯುಗಗಳ ಜಲಚಾಲಿತ ಗಿರಣಿಗಳು, ಇತ್ಯಾದಿ.

	ಪುನರ್ನಿವೇಶ ತಂತ್ರದ ಅನ್ವಯ: ಹದಿನೇಳನೆಯ ಶತಮಾನದಲ್ಲಿಯೇ ಪುನರ್ನಿವೇಶ ತಂತ್ರವನ್ನು ಎಂಜಿನಿಯರಿಂಗಿಗೆ ಅನ್ವಯಿಸಲಾಗಿತ್ತು. ಡೆನಿಸ್ ಪಾಪಿನ್ ಎನ್ನುವ ಫ್ರೆಂಚ್ ಭೌತವಿಜ್ಞಾನಿ 1680ರಲ್ಲಿ ಜೀರ್ಣಕವನ್ನು (ಡೈಜೆಸ್ಟರ್) ಉಪಜ್ಞಿಸಿದ. ಇದೊಂದು ಸಂಮರ್ದಪಾಚಕ (ಪ್ರೆಶರ್ ಕುಕರ್). ಇದರಲ್ಲಿ ಮುಚ್ಚಳದ ಮೇಲೆ ಮಡಗಿದ್ದ ತೂಕಗಳು ಒತ್ತಡವನ್ನು ನಿಯಂತ್ರಿಸುತ್ತಿದ್ದವು. 1788ರಲ್ಲಿ ಜೇಮ್ಸ್ ವಾಟ್ ಉಗಿಯಂತ್ರಕ್ಕೆ ನಿಯಾಮಕವನ್ನು (ಗವರ್ನರ್) ಅಳವಡಿಸಿದ. ಅದೇ ಸುಮಾರಿಗೆ ಗಾಳಿಗಿರಣಿಯಲ್ಲಿ ಅರೆತದ ಜವವನ್ನು ನಿಯಂತ್ರಿಸಲು ಹಾಯಿಗಳಿಗೆ ಗರಿಗಳನ್ನು ಜೋಡಿಸಲಾಯಿತು.

	ಉತ್ಪಾದನೆ ಹಾಗೂ ಸಂಸ್ಕರಣೆಯ ಕ್ಷೇತ್ರಗಳು, ಜಲನೌಕೆ ಹಾಗೂ ವಾಯುನೌಕೆಗಳ ನಿಯಂತ್ರಣ, ಹಲವು ಬಗೆಯ ಸೇನಾಸಲಕರಣೆಗಳು ಇಲ್ಲೆಲ್ಲ ನಿಯಂತ್ರಣ ವ್ಯವಸ್ಥಾ ಎಂಜಿನಿಯರಿಂಗಿನ ಅಮಿತ ಅನ್ವಯಗಳಿವೆ. ಉದಾಹರಣೆಗೆ ತುಪಾಕಿಯ ಗುರಿಹಿಡಿತ ರೇಡಾರ್ ನಿಯಂತ್ರಿತವಾಗಿ ಸ್ವತಶ್ಚಲಿ ಆಗುವುದನ್ನು ಯುದ್ಧದಿನಗಳಲ್ಲಿ ಸಿದ್ಧಿಸಲಾಗಿತ್ತು. ಇಂದು ಗಣಕಗಳನ್ನು ಉಪಯೋಗಿಸಿ ಬಹುವಿಧದ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಉದಾಹರಣೆಗೆ ತೈಲ ಸಂಸ್ಕರಣಾಗರಗಳ ಕ್ರಿಯೆ, ಆಕಾಶನೌಕೆಗಳ ಪಥ ಹಾಗೂ ವೇಗನಿಯಂತ್ರಣ ಇತ್ಯಾದಿ.

	ವ್ಯವಸ್ಥೆಯ ಅಧ್ಯಯನ : ಯಾವುದೇ ವ್ಯವಸ್ಥೆ  ನ್ನು ಒಂದು ನಿವೇಶ-ನಿರ್ಗಮ ಸಲಕರಣೆ ಎಂಬುದಾಗಿ ಸೂತ್ರೀಕರಿಸಹುದು (ಚಿತ್ರ). ವ್ಯವಸ್ಥೆಯ ಪ್ರಕಾರದ Sನ್ನು ಹಲವಾರು ಉಪವ್ಯವಸ್ಥೆ ಇಲ್ಲವೆ ಘಟಕಗಳಾಗಿ ಒಡೆಯುವುದು ಸಾಧ್ಯ. ವ್ಯವಸ್ಥೆನ ಆಂತರಿಕ ರಚನೆಯನ್ನು ಚಿತ್ರದಲ್ಲಿ ಸೂತ್ರೀಕರಿಸಿ ತೋರಿಸಿದೆ. ಆದ್ದರಿಂದ ವ್ಯವಸ್ಥೆಯ ಉಪವ್ಯವಸ್ಥೆಗಳ ನಡುವೆ ಮಾಹಿತಿ ಹೇಗೆ ಹರಿಯುವುದು ಎಂದು ತಿಳಿದಿದ್ದರೆ ಆಗ ಆ ವ್ಯವಸ್ಥೆಯನ್ನು ಕ್ರಮಬದ್ಧವಾಗಿ ವಿಶ್ಲೇಷಿಸಬಹುದು. 

ಚಿತ್ರ-2-ಮತ್ತು-3

	ನಿಯಂತ್ರಣ ವ್ಯವಸ್ಥೆಗಳಿಗೆ ಸಾಕಷ್ಟು ಉದಾಹರಣೆಗಳು ನಮ್ಮ ಆಸುಪಾಸಿನಲ್ಲಿವೆ. ಸುಲಭ ನಿದರ್ಶನವೊಂದು ಇಲ್ಲಿ ಬರೆದಿದೆ. ಚಿತ್ರ(3)ರಲ್ಲಿ ಕಾಣಿಸಿರುವ ವಿದ್ಯುತ್ಕಾಂತ ಸಲಕರಣೆ ಅತ್ಯಂತ ಸರಳವಾದ ವ್ಯವಸ್ಥೆ. ಅದರಲ್ಲಿ ಂ ಬ್ಯಾಟರಿಯನ್ನೂ ವೋಲ್ಟೇಜ್‍ದಾಯಕ) ಐ ಹೊರೆಯನ್ನೂ  Sಗುಂಡಿಯನ್ನೂ ಪ್ರತಿನಿಧಿಸುವುವು. ಉದಾಹರಣೆಗೆ  ಐದೀಪ ಇಲ್ಲವೇ ಗಂಟೆ ಇಲ್ಲವೇ ಶಾಖಕಾರಿನಲ್ಲಿರುವ ಗುಂಡಿಯನ್ನು ಮುಚ್ಚಿದಾಗ ವಿದ್ಯುನ್ಮಂಡಲ ಮುಚ್ಚುವುದು ಮತ್ತು ಪ್ರವಾಹ ಬ್ಯಾಟರಿಯಿಂದ ಹೊರಗೆ ಹರಿಯುವುದು. ಆಗ ಹೊರೆ ಉಪಯುಕ್ತ ಕಾರ್ಯವನ್ನು ಮಾಡುತ್ತದೆ. ಗುಂಡಿಯನ್ನು ತೆರೆದಾಗ ಈ ವ್ಯವಸ್ಥೆಯಲ್ಲಿ ಪ್ರವಾಹದ ಹರಿವು ನಿಂತು ಹೊರೆ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಹೀಗೆ ಗುಂಡಿಯ ಮೇಲಿನ ಪರಿಕರ್ಮ ಬ್ಯಾಟರಿಯಿಂದ ಹೊರೆ ಎಡೆಗಿನ ಶಕ್ತಿಪ್ರವಾಹವನ್ನು ನಿಯಂತ್ರಿಸುವುದು. ಗುಂಡಿಯ ಬದಲು ಪ್ರವಾಹನಿಯಂತ್ರಕವನ್ನು (ರೀಯೋಸ್ಟ್ಯಾಟ್) ಅಳವಡಿಸಿದ್ದಾದರೆ ಅಂಥ ಸಲಕರಣೆ ಕ್ರಮೇಣ ನಿಯಂತ್ರಣ ಯಾ ಅವಿಚ್ಛಿನ್ನ ನಿಯಂತ್ರಣ ಇರುವ ಸಾಧನದ ಒಂದು ರೂಪ ಎನ್ನಿಸುವುದು.

	ವಿಜ್ಞಾನ ಮತ್ತು ತಂತ್ರವಿದ್ಯೆಯಲ್ಲಿ ನಾವು ಮೂಲತಃ ನಿಯಂತ್ರಣ ವ್ಯವಸ್ಥೆಗಳನ್ನು ಪರಿಶೀಲಿಸುವೆವು. ನಿಜಕಾಲದಲ್ಲಿ ಅವಿಚ್ಛಿನ್ನವಾಗಿ ಆಜ್ಞೆನೀಡುವುದು, ಅದನ್ನು ಹತೋಟಿಯಲ್ಲಿ ಇಡುವುದು, ದಿಗ್ದರ್ಶಿಸುವುದು ಎಲ್ಲವೂ ಈ ವ್ಯವಸ್ಥೆಗಳು ನಿರ್ವಹಿಸುವ ಪಾತ್ರ. ಅಂದ ಮಾತ್ರಕ್ಕೆ ತತ್ಸಂಬಂಧವಾದ ನಿಯಂತ್ರಣ ಭಾವನೆಗಳು ಈ ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ- ಮಾನವಿಕ ಕ್ಷೇತ್ರಗಳಲ್ಲಿಯೂ ಅವುಗಳ ವ್ಯಾಪಕ ಬಳಕೆ ಉಂಟು.

	ನಿಯಂತ್ರಣ ವ್ಯವಸ್ಥೆಗಳ ವರ್ಗೀಕರಣ: ವ್ಯಾಪಕವಾಗಿ ನಿಯಂತ್ರಣ ವ್ಯವಸ್ಥೆಗಳಲ್ಲಿ ಎರಡು ವರ್ಗಗಳಿವೆ- ತೆರೆದ ಕುಣಿಕೆ (ಅಥವಾ ಪುನರ್ನಿವೇಶರಹಿತ) ವ್ಯವಸ್ಥೆಗಳು, ಮುಚ್ಚಿದ ಕುಣಿಕೆ (ಅಥವಾ ಪುನರ್ನಿವೇಶಸಹಿತ) ವ್ಯವಸ್ಥೆಗಳು. ತೆರೆದ ಕುಣಿಕೆ ವ್ಯವಸ್ಥೆಯಲ್ಲಿ ನಿವೇಶ ಸಂಜ್ಞೆ ಅಥವಾ ಅನುಜ್ಞೆಯನ್ನು ಊಡಿ ಯುಕ್ತ ನಿರ್ಗಮವನ್ನು ಪಡೆಯಲಾಗುವುದು. ಇಲ್ಲಿ ನಿರ್ಗಮ ಸಲಕರಣೆ ನಿವೇಶ ಠಾಣ್ಯಕ್ಕಿಂತ ಎಲ್ಲೊ ದೂರದಲ್ಲಿ ಇರುವುದುಂಟು. ಆದ್ದರಿಂದ ತೆರೆದ ಕುಣಿಕೆ ವ್ಯವಸ್ಥೆಯಲ್ಲಿ ನಿಯಂತ್ರಣ ಪರಿಕರ್ಮಲಭ್ಯ ಫಲಿತಾಂಶವನ್ನು ಅವಲಂಬಿಸಿಲ್ಲ. ಬ್ರೆಡ್ಡಿನಿಂದ ಟೋಸ್ಟ್ ತಯಾರಿಸಲು ಉಪಯೋಗಿಸುವ ಟೋಸ್ಟರಿನ ಕ್ರಿಯೆಯನ್ನು ಗಮನಿಸೋಣ. ಸಾಧಾರಣ ಗಡಿಯಾರದಿಂದ ಚಾಲೂ ಆಗುವ ಸಂಯಂತ್ರವನ್ನು ಟೋಸ್ಟರಿಗೆ ಅಳವಡಿಸಬಹುದು. ಟೋಸ್ಟರಿನ ತಪನಭಾಗವಾದ (ಹೀಟಿಂಗ್ ಎಲಿಮೆಂಟ್) ಇದು ವಿದ್ಯುತ್ತಿನಿಂದ ಉದ್ರಿಕ್ತವಾಗಿರುವ ಕಾಲಾವಧಿಯನ್ನು ನಿಯಂತ್ರಿಸುತ್ತದೆ. ಆದರೆ ಈ ನಿಯಂತ್ರಣ ಕ್ರಿಯೆ ಟೋಸ್ಟಿನ ಉಷ್ಣತೆ ಹಾಗೂ ಸ್ಥಿತಿಯನ್ನು ಪರಿಗಣಿಸುವುದೇ ಇಲ್ಲ. ಹೀಗಲ್ಲದೇ ನಿಯಂತ್ರಣ ಪರಿಕರ್ಮ ಫಲಿತಾಂಶದ ಉತ್ಪನ್ನವಾಗಿರುವಾಗ ಆ ವ್ಯವಸ್ಥೆ ಮುಚ್ಚಿದ ಕುಣಿಕೆ ವ್ಯವಸ್ಥೆ ಅಥವಾ ಪುನರ್ನಿವೇಶ ವ್ಯವಸ್ಥೆ ಎನ್ನಿಸಿಕೊಳ್ಳುವುದು.  

ಚಿತ್ರ-4

ಚಿತ್ರ (4)ರಲ್ಲಿ ಪುನರ್ನಿವೇಶ ನಿಯಂತ್ರಣ ವ್ಯವಸ್ಥೆಯ ಅತ್ಯಂತ ವಿರಳ ರೇಖಾಚಿತ್ರವನ್ನು ತೋರಿಸಿದೆ. ವ್ಯವಸ್ಥೆಯ ಬೇರೆ ಬೇರೆ ಭಾಗಗಳ ನಡುವಿನ ಕ್ರಿಯಾಸಂಬಂಧವನ್ನು ಅದರಲ್ಲಿ ಕಾಣಬಹುದು.

	ಉಲ್ಲೇಖನಿವೇಶ (ರೆಫರೆನ್ಸ್ ಇನ್‍ಪುಟ್) ಎಂಬುದು ವ್ಯವಸ್ಥೆಗೆ ಊಡಲಾಗುವ ಆಧಾರಭೂತ ನಿವೇಶ. ಇದರಿಂದಾಗಿ ವ್ಯವಸ್ಥೆ ಅಪೇಕ್ಷಿತ ರೀತಿಯಲ್ಲಿ ವರ್ತಿಸುವುದು. ಆದ್ದರಿಂದ ಇದನ್ನು ಸಮಾನಾರ್ಥಕವಾಗಿ ವ್ಯವಸ್ಥೆಯ ಅಪೇಕ್ಷಿತ ನಿರ್ಗಮ ಎಂದು ಹೇಳುವುದೂ ಉಂಟು. ಈ ಗತೀಯ ವ್ಯವಸ್ಥೆಯ ಯಥಾರ್ಥ ನಿರ್ಗಮ ನಿಯಂತ್ರಿತವಾಗಿರುವುದರಿಂದ ಅದನ್ನು ಪುನರ್ನಿವೇಶ ಪಥದ ಮೂಲಕ ಪ್ರೇಷಿಸಿ ನಿಯಂತ್ರಣ ಭಾಗವೊಂದರಲ್ಲಿ ಅಪೇಕ್ಷಿತ ನಿರ್ಗಮದೊಂದಿಗೆ ಹೋಲಿಸಲಾಗುವುದು. ಯಥಾರ್ಥ ಮತ್ತು ಅಪೇಕ್ಷಿತ ನಿರ್ಗಮಗಳ ನಡುವೆ ದೋಷ ಯಾ ಅಪಸಾಮ್ಯ ಇದ್ದರೆ ನಿಯಂತ್ರಣ ಭಾಗ ಪ್ರೇರಕ ಸಂಜ್ಞೆ ಅಥವಾ ನಿಯಂತ್ರಣ ಪ್ರಯತ್ನವನ್ನು ಪ್ರಕಟಿಸುವುದು. ಇದು ನಿಯಂತ್ರಿಕ ಪ್ರಕ್ರಿಯೆಯ ಮೇಲೆ ವರ್ತಿಸಿ ಯಾಥಾರ್ಥ ನಿರ್ಗಮವನ್ನು ಅಪೇಕ್ಷಿತ ನಿರ್ಗಮದ ಮೌಲ್ಯದತ್ತ ತಳ್ಳುತ್ತದೆ. ತತ್ಪರಿಣಾಮವಾಗಿ ದೋಷ ಕಡಿಮೆ ಆಗುವುದು. ವಾಸ್ತವವಾಗಿ ಈ ಮುಚ್ಚಿದ ಕುಣಿಕೆ ಕ್ರಿಯೆ ಪರಿಸರದ ಚರಗಳು ಅನಿವಾರ್ಯವಾಗಿ ಊಡುವ ಕ್ಷೋಭೆ ನಿವೇಶಗಳನ್ನು (ಡಿಸ್ಟರ್ಬೆನ್ಸ್ ಇನ್‍ಪುಟ್ಸ್) ವ್ಯವಸ್ಥೆ ಕ್ರಿಯಾಶೀಲವಾಗಿ ಸರಿದೂಗಿಸಲು ನೆರವಾಗುತ್ತದೆ. ಅಲ್ಲದೆ ನಿಯಂತ್ರಿತ ಪ್ರಕ್ರಿಯೆಯ ಪ್ರಾಚಲಗಳು ಬದಲಾಗುತ್ತಿರುವಾಗಲೂ ಅಪೇಕ್ಷಿತ ಗತೀಯ ಅನುಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

	ತೆರೆದ ಕುಣಿಕೆ ಮತ್ತು ಮುಚ್ಚಿದ ಕುಣಿಕೆ ನಿಯಂತ್ರಣ ವ್ಯವಸ್ಥೆಗಳ ನಡುವಿನ ವ್ಯತ್ಯಾಸವನ್ನು ರಸ್ತೆ ಚೌಕಿಯಲ್ಲಿ ಇರಿಸಿರುವ ವಾಹನ ಸಂಜ್ಞಾ ದೀಪಗಳು ವರ್ತಿಸುವ ಬಗೆಯಿಂದ ನಿದರ್ಶಿಸಬಹುದು. ಚೌಕಿಯಲ್ಲಿ ಸಂಧಿಸುವ ರಸ್ತೆಗಳು ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ದಿಶೆಗಳಲ್ಲಿ ಇರಲಿ ಹಾಗೂ ವಾಹನಗಳಿಗೆ ಆ ದಿಶೆಗಳಲ್ಲಿ ಮಾತ್ರ ಸಾಗಲು ಪರವಾನಿಗೆ ಇರಲಿ. ಒಂದು ರಸ್ತೆಯ ನೇರ ವಾಹನ ಹರಿಯಲು ಹಸಿರು ಕಂದೀಲು ಕಾಣುತ್ತಿರುವಾಗ ಇನ್ನೊಂದು ರಸ್ತೆಯ ನೇರವಾಹನ ಸಂಚಾರ ಬಂದ್ ಆಗಲು ಕೆಂಪು ಕಂದೀಲು ಕಾಣುತ್ತಿರುವುದು. ಈ ದೀಪಗಳ ಬಣ್ಣ ಬದಲಾವಣೆ (ಕೆಂಪು/ಹಸಿರು) ಸ್ವತಶ್ಚಲಿಯಾಗಿ ನಡೆಯುತ್ತದೆ ಎಂದೂ ಒಂದೊಂದು ದಿಶೆಯಲ್ಲಿ ಕೆಂಪು/ಹಸಿರು ಎಷ್ಟೆಷ್ಟು ಹೊತ್ತು ಉರಿಯುತ್ತಿರಬೇಕೆಂಬ ಕಾಲ ನಿರ್ಧಾರ ಮೊದಲೇ ಆಗಿರುತ್ತದೆ ಎಂದೂ ಭಾವಿಸೋಣ. ಅರ್ಥಾತ್ ಇಲ್ಲಿ ವಾಹನಗಳ ಸಂಮರ್ಧ, ನಿರೀಕ್ಷಾ ವೇಳೆ ಯಾವುದೂ ಮುಖ್ಯವಲ್ಲ. ಪೂರ್ವನಿರ್ಧರಿತವಾದಷ್ಟು ಹೊತ್ತು ಆಯಾ ಬಣ್ಣದ ದೀಪ ಆಯಾ ದಾರಿಯ ನೇರ ಉರಿಯುತ್ತಿರುವುದು. ಈ ಕಾಲಾವಕಾಶವನ್ನು ನಿಯಂತ್ರಿಸುವ ಸಂಯಂತ್ರ (ಇದು ಕಾಲಮಾಪಕ) ವಾಹನ ಸಂಮರ್ದವನ್ನು ಲೆಕ್ಕಿಸದೆ ಯಾಂತ್ರಿಕವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿರುವುದು. ಇದೊಂದು ತೆರೆದ ಕುಣಿಕೆ ನಿಯಂತ್ರಣ ವ್ಯವಸ್ಥೆ.

	ಮುಚ್ಚಿದ ಕುಣಿಕೆ ನಿಯಂತ್ರಣ ವ್ಯವಸ್ಥೆಯಲ್ಲಿ ಕಾಲಮಾಪಕಕ್ಕೆ ಹೆಚ್ಚಿನ ಒಂದು ಹೊಣೆ ಉಂಟು: ಯಾವ ರಸ್ತೆಯಲ್ಲಿ ವಾಹನಸಂಚಾರ ಅಧಿಕ ಸಂಮರ್ದಯುತವಾಗಿದೆ ಎಂಬ ಅರಿವು ಅದಕ್ಕೆ ಇರುವುದು ಮತ್ತು ತದನುಗುಣವಾಗಿ ಅದು ಹಸಿರು ಕೆಂಪು ದೀಪಗಳ ಉರಿತವನ್ನು ನಿಯಂತ್ರಿಸುವುದು. ಅರ್ಥಾತ್ ಇಲ್ಲಿ ಕಾಲಮಾಪಕಕ್ಕೂ ವಾಹನ ಸಂಮರ್ದಕ್ಕೂ ನೇರವಾದ ಸಂಬಂಧವಿದೆ. ಪುನರ್ನಿವಿಷ್ಟ ನಿಯಂತ್ರಣವಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.

	ನಿಯಂತ್ರಣ ವ್ಯವಸ್ಥೆಗಳ ಬಗೆಗಳು. 1. ಮನುಷ್ಯ ನಿರ್ಮಿತ ನಿಯಂತ್ರಣ ವ್ಯವಸ್ಥೆಗಳು: ವಿದ್ಯುತ್ ಗುಂಡಿ (ಎಲೆಕ್ಟ್ರಿಕ್ ಸ್ವಿಚ್) ಅತ್ಯಂತ ಸರಳವಾದ ಉದಾಹರಣೆ. ಸ್ವತಶ್ಚಲಿ ನಿಯಂತ್ರಣಗಳೆಲ್ಲವು ಮನುಷ್ಯ ನಿರ್ಮಿತವೆ. ಇವೆಲ್ಲವೂ ಪುನರ್ನಿವೇಶ ಸಂಯಂತ್ರಗಳ ಆಧಾರದ ಮೇಲೆ ಕಾರ್ಯ ನಡೆಸುತ್ತವೆ.

	2.	ಜೈವಿಕವನ್ನೂ ಒಳಗೊಂಡಂತೆ ನೈಸರ್ಗಿಕ ನಿಯಂತ್ರಣ ವ್ಯವಸ್ಥೆಗಳು: ಎಲ್ಲ ಜೀವಂತ ವ್ಯವಸ್ಥೆಗಳೂ ತಮ್ಮ ಆಂತರಿಕ ಪರಿಸರವನ್ನು ದಕ್ಷವಾಗಿ ನಿಯಂತ್ರಿಸಲೇಬೇಕು. ಜೀವಂತ ವ್ಯವಸ್ಥೆಗೆ ಸಂಘಟನಾತ್ಮಕವಾಗಿ ಉಪಯುಕ್ತವಾಗುವ ಕೋಶಗಳಲ್ಲಿ ವಿಶೇಷೀಕರಣವನ್ನು ನಿಸರ್ಗ ಸಾಧಿಸಿರುವುದರಿಂದ ಮನುಷ್ಯನಂಥ ಸಂಕೀರ್ಣ ಜೀವಿಯ ಉಗಮ ಸಾಧ್ಯವಾಗಿದೆ. ಮನುಷ್ಯ ದೇಹದಲ್ಲಿ ನಿಯಂತ್ರಣ ವ್ಯವಸ್ಥೆಗಳು ವಿಫುಲವಾಗಿವೆ. ಉದಾಹರಣೆಗೆ ದೇಹೋಷ್ಣತೆಯನ್ನು ಒಂದೇ ಹದದಲ್ಲಿ ಕಾದಿಸಿರುವ ವ್ಯವಸ್ಥೆ.

	3.	ನೈಸರ್ಗಿಕ ಹಾಗೂ ಮನುಷ್ಯಕೃತ ಘಟಕಗಳಿರುವ ನಿಯಂತ್ರಣ ವ್ಯವಸ್ಥೆಗಳು: ಮನುಷ್ಯ-ಯಂತ್ರ ಅಂತರಕ್ರಿಯೆಯನ್ನು ಕುರಿತು ಈ ವ್ಯವಸ್ಥೆಗಳಿವೆ. ಉದಾಹರಣೆಗೆ ಮೋಟರ್ ಕಾರನ್ನು ಚಾಲೂ ಮಾಡುತ್ತಿರುವ ಮನುಷ್ಯ. ಈ ಮನುಷ್ಯ-ಕಾರ್ ವ್ಯವಸ್ಥೆಯ ಪ್ರಧಾನ ಘಟಕಗಳೆಂದರೆ ಚಾಲಕನ ಕೈಗಳು, ಕಣ್ಣುಗಳು, ಮಿದುಳು, ಕಾಲುಗಳು ಮತ್ತು ಸಮಗ್ರವಾಗಿ ಇಡೀ ಕಾರ್. ಇನ್ನೊಂದು ಉದಾಹರಣೆ ಎಂದರೆ ವೀಣಾವಾದ್ಯ ಹಾಗೂ ಅದರ ವಾದಕ ವ್ಯಕ್ತಿ. ಇಲ್ಲಿ ನಿವೇಶವೆಂದರೆ ತಂತಿಗಳನ್ನು ಬೆರಳುಗಳಿಂದ ನಿರ್ದಿಷ್ಟ ನೆಲೆಗಳಲ್ಲಿ ನಿರ್ದಿಷ್ಟ ಒತ್ತಡದಿಂದ ಮಿಡಿಯುವುದು, ಆಗ ನಿರ್ಗಮವಾಗಿ ಉದ್ರ್ದಿಷ್ಟ ಸ್ವರಗಳು ಹೊಮ್ಮುವುವು. ವಾದಕನ ಕಿವಿಗಳು ಅವನ್ನು ಆಲಿಸಿ ವಾಸ್ತವಿಕ ಸ್ವರಗಳಿಗೂ ಅಪೇಕ್ಷಿತ ಸ್ವರಗಳಿಗೂ ಇರುವ ವ್ಯತ್ಯಾಸವನ್ನು (ದೋಷ) ಪರಿಗಣಿಸಿ ತಿದ್ದುಪಡಿಗಳನ್ನು ಮಾಡುವುದು ಸಾಧ್ಯವಾಗುವುದು. ಈ ಪುನರ್ನಿವೇಶ ನಿಯಂತ್ರಣ ವ್ಯವಸ್ಥೆಯ ಘಟಕಗಳೆಂದರೆ ವಾದಕನ ಕೈಗಳು, ಬೆರಳುಗಳು, ಕಿವಿಗಳು ಮತ್ತು ಸಮಗ್ರವಾಗಿ ಇಡೀ ವಾದ್ಯ.

	4.	ಸಾಮಾಜಿಕಾರ್ಥಿಕ ವ್ಯವಸ್ಥೆಗಳು: ಅಭಿಜಾತ ಅರ್ಥಶಾಸ್ತ್ರದ ಬೇಡಿಕೆ ಮತ್ತು ಪೂರೈಕೆ ನಿಯಮವನ್ನು ಇಲ್ಲಿ ಉದಾಹರಿಸಬಹುದು. ಇದೊಂದು ಪುನರ್ನಿವೇಶ ನಿಯಂತ್ರಣ ವ್ಯವಸ್ಥೆ. ಇದರ ಭಾಗಗಳೆಂದರೆ ಪೂರೈಕೆದಾರ, ಬಳಕೆದಾರ, ಬೆಲೆನಿಗದಿಗಾರ ಮತ್ತು ಮಾರುಕಟ್ಟೆ. ಬೆಲೆ ಸ್ಥಿರತೆಯನ್ನು ಈ ವ್ಯವಸ್ಥೆಯ ನಿವೇಶವೆಂದೂ ನಿರ್ದಿಷ್ಟ  ಮಾಲೊಂದರ ಮಾರಾಟ ಬೆಲೆಯನ್ನು ನಿರ್ಗಮವೆಂದೂ ಭಾವಿಸಬಹುದು.

	ಇವೆಲ್ಲ ವ್ಯವಸ್ಥೆಗಳ ಆಧಾರಭೂತ ವಿಧಾನಗಳನ್ನು ಕುರಿತ ಶಾಸ್ತ್ರ, ಸಾಪೇಕ್ಷವಾಗಿ ಅಭಿವರ್ಧನೆಗೊಂಡಿರುವ ನಿಯಂತ್ರಣ ಎಂಜಿನಿಯರಿಂಗಿನ ಸಿದ್ಧಾಂತದಿಂದ ಕವಲೊಡೆದಿದೆ. ಗಣಿತ ಸಂಬಂಧಗಳಿಂದ ಭೌತವ್ಯವಸ್ಥೆಗಳ ಮಾದರಿಗಳನ್ನು ನಿರ್ಮಿಸುವುದರ ಮೇಲೆ ಈ ಸಿದ್ಧಾಂತ ಅವಲಂಬಿತವಾಗಿವೆ.
(ವಿ.ಆರ್‍ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ